ಸು. 1160. ಶಿವಶರಣೆ ಹಾಗೂ ವಚನಕಾರ್ತಿ. ರಾಯಚೂರು ಜಿಲ್ಲೆಯ ಅಮರೇಶ್ವರದ ಆಯ್ದಕ್ಕಿ ಮಾರಯ್ಯನ ಹೆಂಡತಿ. ಈಕೆ ಆಯ್ದಕ್ಕಿ ಲಕ್ಕಮ್ಮನೆಂದೇ ಪ್ರಸಿದ್ಧಳಾಗಿದ್ದಾಳೆ. ಈಕೆಯ ಪತಿ ಬಸವಾದಿ ಪ್ರಮಥರ ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತರುವ ಕಾಯಕದವ. ಹೀಗೆ ತಂದ ಅಕ್ಕಿಯಿಂದ ದಾಸೋಹ ನಡೆಸುತ್ತಿದ್ದ ದಂಪತಿಗಳಿವರು. ಈ ತನಕ ಈಕೆಯ 25 ವಚನಗಳು ಉಪಲಬ್ಧವಾಗಿವೆ. ವಚನಗಳ ಅಂಕಿತ ‘ಮಾರಯ್ಯಪ್ರಿಯ ಅಮಳೇಶ್ವರ ಲಿಂಗ’. ಕಾಯಕವೇ ಕೈಲಾಸ, ಪತಿ ಕರ್ತವ್ಯಚ್ಯುತನಾಗದಂತೆ ಎಚ್ಚರಿಸುವುದು ಮತ್ತು ಅವನನ್ನು ಅನುಸರಿಸುವುದು ತನ್ನ ಧರ್ಮವೆಂದು ನಂಬಿದ್ದವಳು. ಎಂಥ ಪರಿಸ್ಥಿತಿ ಬಂದರೂ ಕಾಯಕಮಾಡಿ ಬದುಕಬೇಕು, ಯಾರಲ್ಲೂ ಯಾಚನೆ ಮಾಡಬಾರದು, ಅಂದಂದಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಶೇಖರಿಸಬೇಕೆಂಬ ಆದರ್ಶವಿದ್ದ ಗೃಹಿಣಿ ಈಕೆ. ಒಮ್ಮೆ ಈಕೆಯ ಪತಿ ಹೆಚ್ಚು ಅಕ್ಕಿ ಆಯ್ದುತಂದಾಗ ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೋ ಬಸವಣ್ಣನ ಅನುಮಾನದ ಚಿತ್ತವೋ; ಆಯ್ದಿಹೆನೆಂಬ ಕಾಯಕದ ಅಱಕೆ ಹಿಂಗಿತೆ, ನಾ ಮಾಡಿಹೆನೆಂಬ ತವಕ ಹಿಂಗಿತೆ; ನಮಗೆ ಎಂದಿನಂದವೆ ಸಾಕು ಸ್ವಾಮಿ, ಹೆಚ್ಚಿನ ಅಕ್ಕಿಯ ಅಲ್ಲಿಯೆ ಸುರಿದು ಬನ್ನಿರಿ’ ಎಂದು ಹಿಂದಕ್ಕೆ ಕಳುಹಿಸಿದಳಂತೆ.

ಕಾಯಕದ ಮಹಿಮೆ ಹೇಳುವ ಈಕೆಯ ಒಂದು ವಚನ ಹೀಗಿದೆ:

ಮಾಡಿನೀಡಿಹೋದೆನೆಂಬಾಗ ಕೈಲಾಸವೇನು ಕೈಕೂಲಿಯೇ ?
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ ಸಲೆಸಂದಿದ್ದಾಗವೆ
ಮಾರಯ್ಯ ಪ್ರಿಯ ಅಮಲೇಶ್ವರಲಿಂಗವಿದ್ದಠಾವೆ ಕೈಲಾಸ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ